ಋಣಪರಿವರ್ತನೆ
	
ಸರ್ಕಾರ ತೀರಿಸಬೇಕಾಗಿರುವ ಹಳೆಯ ಸಾಲಕ್ಕೆ ಪ್ರತಿಯಾಗಿ ಹೊಸ ಸಾಲ ಪತ್ರಗಳ ನೀಡಿಕೆ (ಡೆಟ್ ಕನ್ವರ್ಷನ್). ಹೊಸ ಸಾಲ ಎತ್ತುವಾಗ ಸರ್ಕಾರ ಅದೇ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಆ ವರ್ಷ ತೀರಿಸಬೇಕಾದ ಸಾಲದ ಪರಿವರ್ತನೆಗಾಗಿ ಮೀಸಲಿಡಬಹುದು. ಹಳೆಯ ಸಾಲಪತ್ರ ಹೊಂದಿರುವವರು ಅದರ ಹಣವನ್ನು ಹಿಂದಕ್ಕೆ ಪಡೆಯುವ ಬದಲು ಅದನ್ನು ಹೊಸ ಸಾಲದಲ್ಲಿ ತೊಡಗಿಸಬಹುದು. ಸಾಲ ತೀರುವೆಯ ಕಾಲ ಬರುವ ಮೊದಲೇ ಬೇಕಾದರೂ ಸರ್ಕಾರ ಇಂಥ ಅವಕಾಶವನ್ನು ಸಾಲ ಕೊಟ್ಟವರಿಗೆ ಒದಗಿಸುವುದೂ ಉಂಟು.
	
ಋಣಪರಿವರ್ತನೆಯಿಂದ ಸರ್ಕಾರಕ್ಕೂ ಸಾರ್ವಜನಿಕರಿಗೂ ಅನುಕೂಲವುಂಟು-ಎಂಬ ಅಭಿಪ್ರಾಯವಿದೆ. ಸಾಲ ತೀರುವೆಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕುವುದೆಂಬುದೇ ಸರ್ಕಾರದ ದೃಷ್ಟಿಯಲ್ಲಿ ಇದರ ಮುಖ್ಯ ಪ್ರಯೋಜನ. ಹೆಚ್ಚು ಬಡ್ಡಿಯ ಸಾಲದಿಂದ ಕಡಿಮೆ ಬಡ್ಡಿಯ ಸಾಲಕ್ಕೆ ಪರಿವರ್ತನೆ ಮಾಡುವುದೇ ಸಾಮಾನ್ಯವಾದ್ದರಿಂದ ಸರ್ಕಾರಕ್ಕೆ ಇದರಿಂದ ಬಡ್ಡಿಯ ಹೊರೆ ಕಡಿಮೆಯಾಗುತ್ತದೆ. ಈ ಉದ್ದೇಶಕ್ಕಾಗಿಯೇ ಋಣಪರಿವರ್ತನೆ ಕೈಗೊಂಡಿರುವ ನಿದರ್ಶನಗಳಿವೆ. ಹಳೆಯ ಸಾಲದ ಬಡ್ಡಿಯ ದರಕ್ಕಿಂತ ದೇಶದಲ್ಲಿ ಪ್ರಚಲಿತವಿರುವ ಬಡ್ಡಿಯ ದರ ಕಡಿಮೆಯಾಗಿದ್ದರೆ ಇದರ ಉಪಯೋಗ ಪಡೆಯುವ ಸಲುವಾಗಿ ಸರ್ಕಾರ ಪರಿವರ್ತನೆಯ ಸಾಲ ನೀಡಿ ತನ್ನ ಕತಿeಥಿ ವೆಚ್ಚ ಇಳಿಸಿಕೊಳ್ಳಬಹುದು. ಆದರೆ ಇದರಿಂದ ದೊರಕುವ ಪರಿಹಾರ ಅತ್ಯಲ್ಪವೆಂದು ಹಿಂದಿನ ಅನುಭವದಿಂದ ವೇದ್ಯವಾಗುತ್ತದೆ. ಬ್ರಿಟನ್ನಿನಲ್ಲಿ 1932ರಲ್ಲಿ ಕೈಗೊಂಡ ಋಣಪರಿವರ್ತನೆಯಿಂದ (5%ರ ಸಾಲಗಳನ್ನು 3 1/2%ಯ ಸಾಲಕ್ಕೆ) ವಾರ್ಷಿಕ ಬಡ್ಡಿಯ ವೆಚ್ಚದಲ್ಲಿ ಮೂರು ಕೋಟಿ ಪೌಂಡುಗಳಷ್ಟು ಕಡಿಮೆಯಾದರೂ ಇದು ಸರ್ಕಾರದ ವಾರ್ಷಿಕ ಬಡ್ಡಿ ಪಾವತಿಯ 1/15ರ ಮತ್ತು 1/16ರ ನಡುವೆ ಇತ್ತು. ಈ ಅಲ್ಪ ಪರಿಹಾರ ದೊರಕಬೇಕಾದರೂ ಹೆಚ್ಚು ಬಡ್ಡಿಯ ಸಾಲವನ್ನು ಕಡಿಮೆ ಬಡ್ಡಿಯ ಸಾಲಕ್ಕೆ ಪರಿವರ್ತಿಸಲು ಅನುಕೂಲವಾದ ಪರಿಸ್ಥಿತಿ ಇರಬೇಕು. ಅಂದರೆ ಮಾರುಕಟ್ಟೆಯಲ್ಲಿ ಬಡ್ಡಿಯ ದರ ಕಡಿಮೆಯಾಗಿರಬೇಕು. ಬಡ್ಡಿಯ ದರ ಏರುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಬಡ್ಡಿಯ ದರ ಉಳ್ಳ ಸಾಲಕ್ಕೆ ಮಾತ್ರ ಪರಿವರ್ತನೆ ಸಾಧ್ಯ. ಇಂಥ ಪರಿವರ್ತನೆಯಿಂದ ಋಣ ತೀರುವ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕುವುದಷ್ಟೇ ಪ್ರಯೋಜನ. ಋಣಪರಿವರ್ತನೆಯಿಂದ ಬಡ್ಡಿಯ ಹೊರೆ ಕಡಿಮೆ ಮಾಡುವ ಉದ್ದೇಶ ಇಂಥ ಸಂದರ್ಭದಲ್ಲಿ ಸಫಲವಾಗುವುದಿಲ್ಲ.
	
ಋಣಪರಿವರ್ತನೆಯಿಂದ ಬಡ್ಡಿಯ ಹೊರೆ ಕಡಿಮೆಯಾಗುವಂತಿದ್ದರೆ ಅದರಿಂದ ತೆರಿಗೆದಾರರಿಗೂ ಅನುಕೂಲವುಂಟು. ಬಡ್ಡಿಯ ಪಾವತಿಗಾಗಿ ಜನರ ಮೇಲೆ ಬೀಳುವ ತೆರಿಗೆಯ ಭಾರ ಇಳಿಯುತ್ತದೆ.
	
ಸರ್ಕಾರಕ್ಕೆ ಸಾಲ ಕೊಟ್ಟಿರುವ ಸಾರ್ವಜನಿಕರಿಗೂ ಋಣಪರಿವರ್ತನೆಯಿಂದ ತೊಂದರೆಯಿಲ್ಲವೆಂಬ ಅಭಿಪ್ರಾಯವಿದೆ. ಸಾಲದ ಬಡ್ಡಿಯ ದರ ಕಡಿಮೆಯಾಗುವುದಾದರೂ ಅದು ಸಾಮಾನ್ಯವಾಗಿ ದೇಶದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಯೇ ಇರುತ್ತದೆ. ಅದರ ವರಮಾನ ಕಡಿಮೆಯಾದರೂ ಅದಕ್ಕೆ ತಕ್ಕಂತೆ ತೆರಿಗೆಯ ಭಾರವೂ ಇಳಿಯುವುದರಿಂದ ಅವರಿಗೆ ಒಟ್ಟಿನಲ್ಲಿ ಹೆಚ್ಚಿನ ನಷ್ಟ ಸಂಭವಿಸಲಾರದು.										
 (ಬಿ.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ